ನಯನ, ಉಷ್ಣ

ಉಷ್ಣಶಕ್ತಿ ದಾಸ್ತಾನಾಗಿರುವ ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಾಸ್ತವಿಕ ಭೌತಚಲನೆಯಿಂದ ಆ ಶಕ್ತಿಯ ವರ್ಗಾವಣೆ (ಕನ್ವೆಕ್ಷನ್, ಹೀಟ್). ಉಷ್ಣ ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ವರ್ಗಾವಣೆಯಾಗಲು ಮೂರು ಮುಖ್ಯ ವಿಧಾನಗಳಿವೆ. ವಹನ, ನಯನ ಮತ್ತು ವಿಕಿರಣ. ಘನವಸ್ತುಗಳಲ್ಲಿ ವಹನ ಪ್ರಧಾನವಾಗಿದ್ದರೆ ದ್ರವ ಮತ್ತು ಅನಿಲಗಳಲ್ಲಿ ನಯನ ವಿಧಾನವನ್ನು ಕಾಣಬಹುದು. ವಿಕಿರಣ ವಿಧಾನಕ್ಕೆ ಯಾವ ಮಧ್ಯವರ್ತಿಯೂ ಅವಶ್ಯವಿಲ್ಲ. ಸೂರ್ಯನಿಂದ ಭೂಮಿಗೆ ಉಷ್ಣ ವರ್ಗಾವಣೆ ಆಗುವುದು ಈ ವಿಧಾನದಿಂದ.

	ಉದ್ದ ಪಾತ್ರೆಯಲ್ಲಿ ನೀರಿಟ್ಟು ತಳಭಾಗದಲ್ಲಿ ಉಷ್ಣವನ್ನು ಊಡಿದರೆ ಸ್ವಲ್ಪ ಹೊತ್ತಿನ ಬಳಿಕ ಉಷ್ಣ ನೀರಿನ ಎಲ್ಲ ಭಾಗಗಳಿಗೂ ಪ್ರಸರಿಸುವುದು. ಇದು ನಯನ ವಿಧಾನದಿಂದ ಆದ ವಿದ್ಯಮಾನ. ತಳಭಾಗದಲ್ಲಿ ಉಷ್ಣಪಡೆದ ನೀರಿನ ಕಣಗಳ ಉಷ್ಣತೆ ಹೆಚ್ಚಾಗಿ ಅವುಗಳ ಸಾಂದ್ರತೆ ಕಡಿಮೆ ಆಗುವುದು. ಹೀಗೆ ಹಗುರವಾದ ನೀರು ಮೇಲಕ್ಕೆ ಏರುತ್ತದೆ. ಇದರಿಂದ ತೆರವಾದ ಪ್ರದೇಶವನ್ನು ಮೇಲ್ಭಾಗದ ಕಡಿಮೆ ಉಷ್ಣತೆಯ ನೀರಿನ ಕಣಗಳು ಕೆಳಗೆ ಬಂದು ಆಕ್ರಮಿಸಿಕೊಳ್ಳುತ್ತವೆ. ಈ ರೀತಿಯಾಗಿ ಹಗುರವಾದ ನೀರು ಏರುತ್ತಲೂ ಭಾರವಾದ ನೀರು ಇಳಿಯುತ್ತಲೂ ಇರುವುದರಿಂದ ನಯನ ಪ್ರವಾಹ ನೀರಿನೊಳಗೆ ಏರ್ಪಡುವುದು. ಈ ವಿಧಾನದಿಂದಲೇ ಪಾತ್ರೆಯಲ್ಲಿರುವ ಎಲ್ಲ ನೀರೂ ಕಾಯುವುದಾಗಿದೆ. ವಾಯುಮಂಡಲದಲ್ಲಿ ಕೂಡ ಉಷ್ಣತೆಯ ವ್ಯತ್ಯಾಸಗಳಿಂದ ಉತ್ಪನ್ನವಾಗುವ ಸಾಂದ್ರತೆಯ ಬದಲಾವಣೆಗಳಿಂದ ನಯನ ಪ್ರವಾಹ ಏರ್ಪಡುತ್ತದೆ.

	ಉಷ್ಣನಯನ ವಿಧಾನವನ್ನು ಉಪಯೋಗಿಸಿಕೊಂಡು ನಿತ್ಯಜೀವನದಲ್ಲಿ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಉದಾಹರಣೆಗೆ ಶೀತವಲಯ ಪ್ರದೇಶಗಳಲ್ಲಿ ವಾಸದ ಕೊಠಡಿಯೊಳಗೆ ಸುಖೋಷ್ಣ ವಾತಾವರಣವನ್ನು ಪಡೆಯಲು ಗೋಡೆಗಳ ತಳಭಾಗದಲ್ಲಿ ಅಳವಡಿಸಿದಂತೆ ಉಷ್ಣಪ್ರಸಾರಕಗಳನ್ನು ಸ್ಥಾಪಿಸಬಹುದು. ಅವುಗಳ ಸುತ್ತ ಇರುವ ವಾಯುವಿನ ಉಷ್ಣತೆ ಏರಿ ಹಗುರವಾಗುವುದರಿಂದ ಮೇಲೇರುತ್ತದೆ. ಆ ಪ್ರದೇಶಕ್ಕೆ ಉಳಿದ ಪ್ರದೇಶಗಳಿಂದ ತಂಪುಗಾಳಿ ಪ್ರವೇಶಿಸುವುದು. ಇದು ಸಹ ಕಾದ ಬಳಿಕ ಮೇಲೇರುತ್ತದೆ. ಹೀಗಾಗಿ ಇಡೀ ಕೊಠಡಿಯಲ್ಲಿ ಉಷ್ಣ ವಾಯುವಿನ ಪರಿಚಲನೆ ಉತ್ಪನ್ನವಾಗಿ, ಸುಖೋಷ್ಣ ಪರಿಸ್ಥಿತಿ ಏರ್ಪಡುತ್ತದೆ. ಸಮುದ್ರತೀರಪ್ರದೇಶಗಳಲ್ಲಿ ಭೂ ಮತ್ತು ಸಮುದ್ರದ ಮಾರುತಗಳು ಬೀಸುವುದಕ್ಕೆ ಉಷ್ಣನಯನವೇ ಕಾರಣ. ನೀರಿಗಿಂತ ಭೂಮಿಯ ಉಷ್ಣ ಪರಿಗ್ರಹಣ, ಅಂತೆಯೇ ಉಷ್ಣ ವಿಸರ್ಜನೆ ಬೇಗ ಆಗುತ್ತವೆ. ಆದ್ದರಿಂದ ಹಗಲಿನಲ್ಲಿ ಭೂಮಿಯ ಮೇಲಿನ ವಾಯು ಬೇಗ ಕಾದು ಮೇಲಕ್ಕೆ ಏರುತ್ತದೆ. ಆ ಪ್ರದೇಶಕ್ಕೆ ಸಮುದ್ರದಿಂದ ವಾಯು ಬೀಸುವುದು. ಹೀಗಾಗಿ ರಾತ್ರಿಯಲ್ಲಿ ಭೂಮಿಯ ಮೇಲಿನ ವಾಯು ಹೆಚ್ಚು ತಂಪಾಗಿರುವುದರಿಂದ ಅಲ್ಲಿಂದ ಕಡಲ ಕಡೆಗೆ ಗಾಳಿ ಬೀಸುತ್ತದೆ.
(ಕೆ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ